ನಮ್ಮೂರು

“1” ಲಕ್ಷ ಕೊಟ್ಟರೆ “ಕ್ರಿಮಿನಿಲ್” ಗಳನ್ನು ಸಮಾಜ ಸುಧಾರಕರಂತೆ “ಪುಲ್ಲ್ ಪೇಜ್” ಆರ್ಟಿಕಲ್ ಮಾಡಿ ಬಿಂಬಿಸೋ ತುಖಾಲಿ ಪ್ರತಿಕೆಗಳೇ…!

Spread the love

ಕೊಲೆ ಆರೋಪಿಗಳ ಜೊತೆ ಸುದ್ದಿಗಾಗಿ ಸಂಪರ್ಕ ಹೊಂದಿದ್ದರು ಮತ್ತು ಆರೋಪಿಗಳು ಶರಣಾಗಲು ಸಹಾಯ ಮಾಡಿದರು ಎಂದು ಆರೋಪಿಸಿ ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಮೆಹಬೂಬ್ ಮುನವಳ್ಳಿಯವರನ್ನು ದಾವಣಗೆರೆಯ ನ್ಯಾಮತಿ ಪೊಲೀಸರು ಬಂಧಿಸಿದ್ದಾರೆ. ಇದು ಪತ್ರಿಕಾ ಸ್ವಾತಂತ್ರ್ಯ, ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಎಲ್ಲಾ ಕ್ರೈಂ ರಿಪೋರ್ಟರ್ ಗಳಿಗೆ ಅಂಡರ್ ವಲ್ಡ್ ಡಾನ್ ಗಳಿಂದ ಹಿಡಿದು ಪುಡಿ ರೌಡಿಗಳವರೆಗೆ ಸಂಪರ್ಕ ಇರುತ್ತದೆ. ಎಲ್ಲಾ ಪೊಲೀಸ್ ಠಾಣೆಗಳ ಕ್ರೈಂ ಬೀಟ್ ಕಾನ್ಸ್ ಸ್ಟೇಬಲ್ ಗಳ ಫೋನ್ ಕಾಲ್ ಪರಿಶೀಲಿಸಿದರೆ ರೌಡಿಗಳ ಸಂಪರ್ಕ ಬಯಲಿಗೆ ಬರುತ್ತದೆ. ಹಾಗೆಂದು ರೌಡಿಗಳ ಜೊತೆ, ಕೊಲೆ ಹಲ್ಲೆ ಆರೋಪಿಗಳ ಜೊತೆ ಯಾರೂ ಸಂಪರ್ಕ ಹೊಂದಿರಲೇಬಾರದು ಎಂಬ ಕಾನೂನೇನೂ ಇಲ್ಲ. ಆರೋಪಿಗಳು ತಪ್ಪಿಸಿಕೊಳ್ಳಲು ಸಹಕರಿಸುವುದು, ಅಪರಾಧ ಮಾಡಲು ಸಹಕರಿಸುವುದು ಮಾತ್ರ ಅಪರಾಧವಾಗುತ್ತದೆ. ಮಹಬೂಬ್ ಮುನವಳ್ಳಿ ವಿರುದ್ದ ಇಂತಹ ಆರೋಪವನ್ನು ಪೊಲೀಸರು ಮಾಡುತ್ತಿಲ್ಲ.

ಯಾವುದೇ ಆರೋಪಿಗಳನ್ನು ಸೆರೆಂಡರ್ ಮಾಡಿಸುವುದು ತಪ್ಪೇ ? ಸೆರೆಂಡರ್ ಮಾಡಿಸುವುದು ಪತ್ರಕರ್ತನ ಕೆಲಸವಲ್ಲ, ನಿಜ. ಆದರೆ ಚರ್ಚ್ ಮೇಲೆ ದಾಳಿ ನಡೆದಾಗ ಅಮಾಯಕ ಕ್ರಿಶ್ಚಿಯನ್ ಸನ್ಯಾಸಿನಿಯರು, ಪ್ರತಿಭಟನಾ ನಿರತರ ಮೇಲೆ ಲಾಠಿಚಾರ್ಜ್ ಮಾಡುವಂತೆ ಪೊಲೀಸರನ್ನು ಪ್ರೇರೇಪಿಸಿದ ಪತ್ರಕರ್ತರನ್ನು ನಾವು ನೋಡಿದ್ದೇವೆ. ಮುಸ್ಲೀಮರು, ದಲಿತರ ಹೋರಾಟಗಳ ಮೇಲೆ ಲಾಠಿಚಾರ್ಜ್ ಮಾಡುವಂತೆ ಪೊಲೀಸರನ್ನು ಹುರಿದುಂಬಿಸುವ ಪತ್ರಕರ್ತರನ್ನೂ ನೋಡಿದ್ದೇವೆ. ‘ಪೊಲೀಸ್ ಎನ್ ಕೌಂಟರ್ ಎಂಬ ಕೊಲೆ’ಯನ್ನೂ ವಿಜೃಂಭಿಸಿ ಪೊಲೀಸರ ಸಾಹಸವೆಂದು ಹೊಗಳುವ ಕ್ರೂರಿ ಪತ್ರಕರ್ತರನ್ನೂ ನಾವು ಕಂಡಿದ್ದೇವೆ. ಹೀಗಿರುವಾಗ ನಕಲಿ ಎನ್ ಕೌಂಟರ್ ಗಳನ್ನು ತಪ್ಪಿಸುವ ರೀತಿಯಲ್ಲಿ ಆರೋಪಿಯನ್ನು ಪೊಲೀಸರೆದುರು ಸೆರೆಂಡರ್ ಮಾಡಿಸಿದರೆ ತಪ್ಪೇನು ? ಆರೋಪಿ ತಪ್ಪಿಸಿಕೊಳ್ಳಲು ಸಹಕರಿಸುವುದು ಅಪರಾಧ. ಆರೋಪಿ ಪೊಲೀಸ್ ಠಾಣೆ/ನ್ಯಾಯಾಲಯಕ್ಕೆ ಬರುವಂತೆ ಮಾಡುವುದು ಅಪರಾಧ ಹೇಗಾಗುತ್ತದೆ ? ಸೆರೆಂಡರ್ ಅನ್ನೋದು ಅಪರಾಧವೇ ಅಲ್ಲ. ಶರಣಾಗತಿ ಎನ್ನುವುದು ಆರೋಪಿಯ ‘ಸನ್ನಡತೆ’ ಎಂದು ಪರಿಗಣಿಸಲಾಗುತ್ತದೆ. ನಿರ್ಧಿಷ್ಟ ರಾಜಕೀಯ ಆರೋಪಿಗಳ ಶರಣಾಗತಿಗೆಂದೇ ಸರ್ಕಾರ ಗಣ್ಯರ ಸಮಿತಿಯನ್ನೂ ರಚಿಸಿತ್ತು. ಶರಣಾಗತಿ ಬಳಿಕ ಸಮಿತಿಯಲ್ಲಿದ್ದ ಗಣ್ಯರನ್ನೂ ಬಂಧಿಸಲಾಗುತ್ತದೆಯೇ ?

ಕೊಲೆ ಆರೋಪಿಗಳು ಕೊಲೆ ಮಾಡಿದಾಗ ಪತ್ರಕರ್ತನ ಜೊತೆ ಸಂಪರ್ಕ ಹೊಂದಿರಲಿಲ್ಲ. ಕೊಲೆ ಮಾಡುವುದೂ ಪತ್ರಕರ್ತನಿಗೆ ಮಾಹಿತಿ ಇಲ್ಲ. ಕೊಲೆ ಆರೋಪಿಗಳು ಕೊಲೆ ಮಾಡಿದ ಬಳಿಕ ಪತ್ರಕರ್ತನನ್ನು ಸಂಪರ್ಕಿಸಿದ್ದಾರೆ. ಯಾವುದೇ ಕ್ರಿಯಾಶೀಲ ಪತ್ರಕರ್ತ ತನಗೆ ಬರುವ ಮಾಹಿತಿಯನ್ನು ತಾನೇ ತಡೆಹಿಡಿಯಲಾಗಲ್ಲ. “ನಾನು ಆರ್ ಎಸ್ ಎಸ್ ಮುಖಂಡರೊಬ್ಬರನ್ನು ಇಷ್ಟು ದಿನದೊಳಗೆ ಕೊಲೆ ಮಾಡುತ್ತೇನೆ” ಎಂದು ಅಂಡರ್ ವಲ್ಡ್ ಡಾನ್ ಒಬ್ಬ ನನಗೇ ಫೋನ್ ಮಾಡಿ ಹೇಳಿದ್ದ. ಆತ ಡಾನ್ ಎಂದೂ, ಈ ಹಿಂದೆಯೂ ಹಲವು ಹಿಂದುತ್ವ ನಾಯಕರ ಕೊಲೆ ಮಾಡಿದ್ದಾನೆಂದು ನನಗೆ ಅವನು ಫೋನ್ ಮಾಡಿದ ಬಳಿಕವೇ ಗೊತ್ತಾಗಿದ್ದು. ನಾನು ಅದನ್ನು ಪೊಲೀಸರಿಗೆ ಮಾಹಿತಿ (ನೀಡಿದ್ದೇನೆ) ನೀಡಬಹುದೇ ಹೊರತು ಆ ಅಂಡರ್ ವಲ್ಡ್ ಡಾನ್ ಕೊಟ್ಟ ಮಾಹಿತಿಯನ್ನು ತಡೆಹಿಡಿಯಲು ಆಗಲ್ಲ. ಇಂತಹ ಹತ್ತಾರು ಘಟನೆಗಳಿದ್ದು, ನಾನು ಹಲವು ಪ್ರಕರಣಗಳ ಕೋರ್ಟ್ ಸಾಕ್ಷಿಯಾಗಿದ್ದೇನೆ. ಹಾಗೆಂದು ಪತ್ರಕರ್ತರೇನು ಸದಾ ಕಾಲ ಪೊಲೀಸ್ ಮಾಹಿತಿದಾರರ ಕೆಲಸ ಮಾಡಲಾಗಲ್ಲ. ಮೆಹಬೂಬ್ ಮನವಳ್ಳಿಯ ಸುದ್ದಿ ಬದುಕಿನಲ್ಲೂ ಇದೇ ಆಗಿದೆ. ಮೆಹಬೂಬ್ ಮುನವಳ್ಳಿ ಪತ್ರಕರ್ತನ ವ್ಯಾಪ್ತಿ ಮೀರಿ ಆರೋಪಿಗಳ ಶರಣಾಗತಿಗೆ ಅಥವಾ ಎನ್ ಕೌಂಟರ್ ತಪ್ಪಿಸಲು ಕೆಲಸ ಮಾಡಿರಬಹುದು. ಅದು ಅಪರಾಧವಲ್ಲ. ಹೆಚ್ಚೆಂದರೆ ಪತ್ರಕರ್ತ ಮೆಹಬೂಬ್ ಮುನವಳ್ಳಿಗೆ ನೋಟಿಸ್ ನೀಡಿ ವಿವರಣೆ ಪಡೆಯಬಹುದಾದ, ಪ್ರಕರಣದ ಸಾಕ್ಷಿಯೆಂದು ಪರಿಗಣಿಸಬಹುದಾದ ಪ್ರಕರಣವಿದು.

ಪೊಲೀಸರು ಪತ್ರಕರ್ತ ಮೆಹಬೂಬ್ ಮುನವಳ್ಳಿಯವರನ್ನು ದುರುದ್ದೇಶಪೂರ್ವಕವಾಗಿ ಬಂಧಿಸಿದ್ದಾರೆ ಎಂಬುದಂತೂ ಸ್ಪಷ್ಟ. ಪತ್ರಿಕೋದ್ಯಮದಲ್ಲಿ ಅಲಿಖಿತ ಮಾತೊಂದಿದೆ. “ರಾಜಕಾರಣಿಗಳು, ಕಳ್ಳರು, ಧರ್ಮಾಧಿಕಾರಿಗಳು, ದರೋಡೆಕೋರರು, ಪೊಲೀಸರು, ಸೈನಿಕರು, ರೌಡಿಗಳು, ಭಯೋತ್ಪಾದಕರು, ಸ್ವಾಮೀಜಿಗಳು ಸೇರಿದಂತೆ ಯಾರನ್ನು ಸಂಪರ್ಕಿಸಿದರೂ ಅಪರಾಧ ಎಂದೆನಿಸದ ಅವಕಾಶ ಯಾರಿಗಾದರೂ ಇದ್ದರೆ ಆತ ಪತ್ರಕರ್ತ ಮಾತ್ರ” ಈ ಅವಕಾಶವನ್ನು ಗುಂಡುತುಂಡು ಪಾರ್ಟಿಗಳಿಗೂ, ವೈಯುಕ್ತಿಕ ಜೀವನಕ್ಕೂ ಬಳಕೆ ಮಾಡಿಕೊಳ್ಳುವ ಪತ್ರಕರ್ತರ ಮಧ್ಯೆ ಮೆಹಬೂಬ್ ಮುನವಳ್ಳಿಯ ಸುದ್ದಿಗಾಗಿ ಮತ್ತು ಮಾನವೀಯತೆಗಾಗಿ ಮಾಡಿದ “ಕೆಲಸ” ತಪ್ಪೇ ಅನ್ನಿಸುವುದಿಲ್ಲ.

ಪತ್ರಕರ್ತ ಮೊಹಬೂಬ್ ಮುನವಳ್ಳಿಯ ಬಂಧನ ಪತ್ರಿಕಾ ಸ್ವಾತಂತ್ರ್ಯದ ಹರಣವೇ ಆಗಿದೆ. ಈ ರೀತಿ ಬಂಧನಗಳಾದರೆ ಮುಂದೆ ಕ್ರೈಂ ವರದಿಗಾರಿಕೆ ಎನ್ನುವುದು ಪೊಲೀಸರ ತುತ್ತೂರಿಯಾಗುತ್ತದೆಯಷ್ಟೆ. ನೋಟಿಸ್ ಕೊಟ್ಟು ವಿಚಾರಣೆಗೆ ಒಳಪಡಿಸಬಹುದಾದ ಮೆಹಬೂಬ್ ಮುನವಳ್ಳಿಯವರನ್ನು ಬಂಧಿಸಿದ್ದು ಖಂಡನಾರ್ಹ. ನಾನಂತು ಸ್ಥಳೀಯ ಜನಪರ ಚಳವಳಿ, ಜನರ ಸಮಸ್ಯೆಗಳ ಜೊತೆ ಸದಾ ನಿಂತಿದ್ದ ಮೆಹಬೂಬ್ ಮುನವಳ್ಳಿಯವರ ಪರವಾಗಿದ್ದೇನೆ.

– ನವೀನ್ ಸೂರಿಂಜೆ

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page